Thursday, March 20, 2008

ಹೀಗೊಂದು ಆಲಾಪ

ನನ್ನ ನೀ ಅರಿತೆಯೆಷ್ಟೋ... ನಿನ್ನ ನಾನರಿತೆನೆಷ್ಟೋ?
ನಾವು ಅರಿತಷ್ಟು, ಬೆರೆತಷ್ಟು, ಬೆರೆತು ಬೆಂದಷ್ಟು
ಬೆರೆತು ಮನ ಬೆತ್ತಲಾದಷ್ಟು, ಕಲೆತಷ್ಟು
ಅನಿಸಿತ್ತು ನನಗೆ, ಇದು ನಿರಂತರ....ನಿರಂತರ

ನನ್ನ ಬಾಳ ಬಾಂದಳದಿ ಬಂದಾಗ ನೀನು
ಮನ ಖುಷಿ ಪಟ್ಟಿತ್ತು, ಸುರಿಸಿತ್ತು ಸಂತಷದ ಕಣ್ಣೀರು
ಆಹಾ, ನನಗೂ ಇರುವಳು ಇವಳು ನನ್ನವಳು
ಅಂದಿತ್ತು ಮನ.... ಅರಿತಿತ್ತು

ಅವಮಾನ, ಸೇಡು, ಕಿಚ್ಚು
ಜೊತೆಗಿಷ್ಟು ಉಪ್ಪು, ಹುಳಿ, ಕಾರ
ಸೇರಿತ್ತು , ನನ್ನ ಮನ ಕೆಡಿಸಿತ್ತು, ಮನಸ ಕದಡಿತ್ತು
ನೊಂದು ಬೆಂದಿತ್ತು, ಬೆಂದು ಅತ್ತಿತ್ತು

ಅಮ್ಮನ ಮಾತಿಗೆ ಎದುರಿಲ್ಲ
ಇನ್ನು ನನಗವಳ ನೆಲೆಇಲ್ಲ
ಅಂದಿತ್ತು ಮನ, ನೊಂದಿತ್ತು ಕೂಡ
ಅದು ಜೀವನದ ಗತಿ ಬದಲಿಸಿತ್ತು

ಪ್ರೀತಿ ಉಕ್ಕಿದ್ದು ನಿಜ, ಹರಿದದ್ದು ನಿಜ
ಹರಿದು ಸೋರಿ ಹೋಗಿದ್ದು ನಿಜ
ಮನ ಕಂಪಿಸಿತ್ತು, ಹೃದಯ ತಲ್ಲಣಿಸಿತ್ತು
ನಾ ಬೇಡ ನಿನಗೆ ಅಂದಾಗ, ನೀ ಕೋಪದಿ

ಅತ್ತಿತ್ತು, ಬೆವರಿತ್ತು, ಬಸವಳಿದಿತ್ತು
ಕಾಡಿತ್ತು, ಬೇಡಿತ್ತು, ಕನಸ ಕಂಡಿತ್ತು
ಕನವರಿಸಿತ್ತು, ಕಾಳ ರಾತ್ರಿಯಲಿ; ಕರಾಳವಾಗಿ
ನನಸಾಗಲಿಲ್ಲ, ನಾ ಕಂಡ ಎಷ್ಟೋ ಕನಸುಗಳ ಹಾಗೇ...

ಬಂದದ್ದೊಂದು ರೂಪ, ಇದ್ದದ್ದು ಅದೇ ರೂಪ
ಕನಸ ಕಂಡಿದ್ದ ರೂಪ, ಕೈಗೂಡಲಿಲ್ಲ
ನಾ ಬೇಕೆಂದ ರೂಪಕ್ಕೆ ಶಿಲೆ ಕೆತ್ತಲಾಗಲಿಲ್ಲ
ಶಿಲ್ಪಕ್ಕೆ ಮುನ್ನ, ಕೈಸೋತ ಈ ಜಕಣ

ಇರಲಿ ಅವಳು ನನ್ನವಳು, ಎಂದಿಗೂ, ಎಂದೆಂದಿಗೂ.
ಆಗಲಿಲ್ಲ ಬಾಳಸಂಗಾತಿ, ತಾ ಸ್ಠಿರವಾದಳು ಅಲ್ಲೆ
ಸ್ಠಿರಗೊಂಡಳು ’ಹೃದಯ ಸಂಗಾತಿಯಾಗಿ’
ಇದು ನಿರಂತರ... ನಿರಂತರ