Tuesday, December 16, 2014

ರಜನಿಕಾಂತನ ಲಿಂಗ ಚಿತ್ರದ ವಿಮರ್ಶೆ

ರಜನಿಕಾಂತನ ಲಿಂಗ ಮತ್ತು ಅದರ ಪ್ರಭಾವ - ಏನೋ ನಾ ನೋಡ್ ಅರ್ಥಮಾಡ್ಕಂಡಷ್ಟನ್ನ ಇಲ್ಲಿ ಬರಿತಾ ಇದೇನೆ.
...............................................

ಕನ್ನಡ ಮೂಲದ ಹೀರೋ, ಹೀರೋಹಿನ್, ನಿರ್ಮಾಪಕ, ಕನ್ನಡದ ನೆಲ, ಮೈಸೂರ್ ಅರಮನೆ, ಲಿಂಗನಮಕ್ಕಿ ಡ್ಯಾಮ್ - ಕನ್ನಡ ಭಾಷೆಯೊಂದನ್ನು ಬಿಟ್ಟು ಬಹುತೇಕ ಎಲ್ಲವೂ ಕನ್ನಡಮಯವೇ ರಜನಿಕಾಂತ್ ಅಭಿನಯದ ಲಿಂಗ ಚಿತ್ರದಲ್ಲಿ.


ಸೀನಿಯರ್ ಲಿಂಗನ ಕಥೆ:

1939ರ ಕಾಲಘಟ್ಟದಲ್ಲಿ ರಾಜಮನೆತನದ "ಲಿಂಗೇಶ್ವರ" ಅವ್ರಪ್ಪನ ಇಚ್ಚೆಯಂತೆ ಆಗಿನ ಕಾಲದ ICS ಪಾಸ್ ಮಾಡಿ, ಜೊತೆಗೆ ಸಿವಿಲ್ ಇಂಗಿನಿಯರಿಂಗ್‍ನಲ್ಲಿ ಪದವಿ ಪಡ್ಕಂಡೂ, ಬ್ರಿಟೀಷ್ ಸರ್ಕಾರದಲ್ಲಿ ಕಲೆಕ್ಟರ್ ಆಗಿ ಸಿಂಗನೂರು ಎಂಬ ಪ್ರದೇಶಕ್ಕೆ ಬರ್ತಾನೆ. 


ಆ ಊರಿನಲ್ಲಿ ನೀರಿಲ್ಲದೇ, ಹಸಿವಿನಿಂದ ಜನ ಆತ್ಮಹತ್ಯೆ ಮಾಡಿಕೊಳ್ಳೋದು ಸರ್ವೇ ಸಾಮಾನ್ಯ ವಿಷ್ಯ (ಇಂದಿಗೂ ರೈತರ ಆತ್ಮಹತ್ಯೆಗೆ ಯಾರ್ ಸರ್ಕಾರಗಳೂ, ಪರಿಹಾರ ಕಂಡಿಡಿದಿಲ್ಲಾ ಅನ್ನೋದ್ ಕೂಡ ಅಷ್ಟೇ ಸತ್ಯ). ಆ ಊರಿನ ಜನ, ತಮ್ಮವನೇ ಆದ ಕಲೆಕ್ಟರ್ ಹತ್ತಿರ ಇಲ್ಲಿನ ನೀರಿನ ಸಮಸ್ಯೆಗೆ ಒಂದ್ ಪರಿಹಾರ ಮಾಡಿ ಅಂದಾಗ, ಆ ಊರಿನ ಸನಸ್ಯೆ ಪರಿಹಾರಕ್ಕೆ ಸಿಂಗನೂರಿನ ನದಿಗೆ ಡ್ಯಾಮ್ ಕಟ್ಟಿ ಆ ಜನರ ಕಷ್ಟ ಕಾರ್ಪಣ್ಯಗಳನ್ನ ದೂರ ಮಾಡೋಣ ಅಂತಾ, ಆ ವಿಷ್ಯವನ್ನ ಬ್ರಿಟೀಷ್ ಸರ್ಕಾರಕ್ಕೆ ತಿಳಿಸಿದಾಗ, ಅದರಿಂದ ತಮಗೇನು ಲಾಭ ಅಂತಾ ಯೋಚಿಸೋ ಪರಂಗಿಗಳು, ಡ್ಯಾಮ್ ಕಟ್ಟಕ್ಕಾಗಲ್ಲ ಅಂತಾ ಲಿಂಗೇಶ್ವರನಿಗೆ ಹೇಳ್ತಾರೆ. ತಾನು, ಕಲೆಕ್ಟರಾಗಿಯೂ ಈ ಕೆಲ್ಸವಾಗದ ಮ್ಯಾಗೆ, ಇದ್ಯಾಕ್ ಬೇಕು ಅಂತಾ ಆ ಕೆಲ್ಸಕ್ಕೆ ರಾಜಿನಾಮೇ ಕೊಟ್ಟು, ಅಲ್ಲೇ ಇದ್ದ ಬ್ರಿಟೀಷರಿಗೆ "ನಾನೀ ಡ್ಯಾಮ್ ಕಟ್ಟೇ ತೀರ‍್ತೀನಿ" ಅಂತೇಳಿ ಬರ‍್ತಾನೆ ಲಿಂಗೇಶ್ವರ.


ತನ್ನ ಹುಟ್ಟುಹಬ್ಬದ ಸಮಾರಂಭವನ್ನ ಅಸ್ತ್ರವಾಗಿ ಬಳಸಿಕೊಂಡ ಲಿಂಗೇಶ್ವರ, ಬ್ರಿಟೀಷರಿಂದ ತುಂಬಾ ಚಾಣಾಕ್ಷತನದಿಂದ ಡ್ಯಾಮ್ ಕಟ್ಟಕ್ಕೆ ಅನುಮತಿ ಪಡ್ಕಂಡು ಡ್ಯಾಮ್ ಕಟ್ಟೋ ಕೆಲ್ಸ ಶುರುಮಾಡ್ತಾನೇ. ಅಲ್ಲಿನ ಜನರ ಸಹಕಾರ ಹಾಗೂ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಕೊನೆಗೂ ಛಲಬಿಡದ ತ್ರಿವಿಕ್ರಮನಂತೆ ಅಣೆಕಟ್ಟು ಕಟ್ಟಿಯೇ ಬಿಡುತ್ತಾನೆ. ಹೀರೋ ಇರೋ ಕಡೆಯಲ್ಲ, ವಿಲನ್ನು, ಮತ್ತು ಆ ವಿಲನ್ನಿಗೆ ಸಪೋಟ್ ಮಾಡೋ ಕೆಲ "ನಮಕ್ಕರಾಮ್"ಗಳು ಮಾತ್ರ ಇರಲೇಬೇಕಲ್ವಾ. ಹಾಗೇ, ತನ್ನದೆಲ್ಲವನ್ನೂ ಕಳೆದುಕೊಂಡು ಊರಿನ ಒಳಿತಿಗಾಗಿ ಒಂದ್ ಡ್ಯಾಮ್ ಕಟ್ಟಿ ಜನರ ಬದುಕನ್ನ ಹಸನು ಮಾಡೋ ಲಿಂಗೇಶ್ವರನನ್ನ ಬ್ರಿಟೀಷ್ ಕಡೆಯ ವಿಲನ್ನು, ಮತ್ತು ಆದೇ ಊರಿನ ಒಬ್ಬ "ನಮಕ್ಕರಾಮ್" ಜನರನ್ನ ಎತ್ತಿಕಟ್ಟಿ, ಅವರಿಗೆ ಇಲ್ಲಸಲ್ಲದ್ದನ್ನ ಅವ್ರ ಕಿವಿಗೆ ತುಂಬಿ ಲಿಂಗೇಶ್ವರರನ್ನ ಆ ಊರಿನಿಂದಲೇ ಹೊರಗಾಕುತ್ತಾರೆ. ಈ ಸನ್ನೀವೇಶ ಮಾತ್ರ ಯಾಕೋ ಕಣ್ಣಲ್ಲಿ ನೀರ್ ತರಿಸುತ್ತೆ ಮತ್ತು "ಬಂಗಾರದ ಮನುಷ್ಯನ ರಾಜೀವಪ್ಪ" ಮಾತ್ರ ಬ್ಯಾಡ ಅಂದ್ರೂ ನೆನಪಿಗೆ ಬರೋದ್ ಮಾತ್ರ ತಪ್ಪಲ್ಲ. ಸ್ವತ: ರಾಜನಾಗಿ, ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯಬೇಕಿದ್ದ ಲಿಂಗೇಶ್ವರ, ಆ ಊರನ್ನ ತೊರೆದು, ಎಲ್ಲೋ ಒಂದ್ ಕಡೆ ಗುಡಿಸಿಲಿನಲ್ಲಿ ನೆಮ್ಮದಿಯಾಗ್ ಬದುಕ್ತಾ ಇರ‍್ತಾನೇ.


ನಮ್ಮ್ ಜನರಿಗೆ ಕೆಟ್ಟ್ ಮ್ಯಾಗೇಯೆ ಬುದ್ಧಿ ಬರದು, ಮತ್ತು ಆವಾಗ್ಲೇ ಸತ್ಯ ಹಾಗೂ ಸುಳ್ಳುಗಳ ನಡುವಿನ ಅಂತ ಗೊತ್ತಾಗೋದು ಅಂತಾರಲ್ಲ ಹಾಗೇ, ಕೊನೆಗೆ ತಮ್ಮ ಹಿತೈಷಿ ರಾಜಾ "ಲಿಂಗೇಶ್ವರ"ನನ್ನ ಹುಡುಕಿಕೊಂಡು ಬರ‍್ತಾರೇ ಮತ್ತು ಬಂದು "ನೀವ್ ನಮ್ಮೂರಿಗ್ ಬನ್ನಿ, ನೀವ್ ಕಟ್ಟಿದ ಆ ದೇವಸ್ಥಾನವನ್ನ ನಾವ್ ನಿಮ್ಮ್ ಮೇಲಿನ ಕೋಪಕ್ಕೆ ಅಂದ್ ಮುಚ್ಚಿದ್ದೇವೇ, ತಾವೇ ಬಂದ್ ಅದನ್ನ ತೆಗೆಯಿರಿ" ಅಂತಾ ಪರಿಪರಿಯಾಗಿ ಕೇಳಿಕೊಂಡರೂ, ಗುಡಿಸಿಲಿನಲ್ಲಿ ವಾಸಿಸುವ ರಾಜ "ಲಿಂಗೇಶ್ವರ" ಮಾತ್ರ ಮತ್ತೆ ಆ ಊರಿಗೆ ಬರಲ್ಲ, ಆದ್ರೇ, ನೀವೆಲ್ಲಾ ಸೆಂದಾಕಿರಿ ಅಂತೇಳಿ ಆ ಜನರನ್ನ ಕಳಿಸಿಕೋಡ್ತಾನೇ. ಲಿಂಗೇಶ್ವರ ಡ್ಯಾಮ್ ಕಟ್ಟೊ ಸಮಯದಲ್ಲೇ, ಆತನನ್ನ ಪ್ರೀತಿಸುತ್ತಿದ್ದ ಅದೇ ಊರಿನ ಹುಡುಗಿಯೊಬ್ಬಳು, ಆತ ಊರನ್ನು ತೊರೆದೋಗುತ್ತಿರೋ ಹೊತ್ತಲ್ಲಿ, ಆತ ತನ್ನ್ ಜೊತೆಗ್ ಬರೋದ್ ಬ್ಯಾಡ ಅಂದ್ರೂ, ಆತನೊಂದಿಗೇ ಹೋಗಿ, ಆತನ ಮಡದಿಯಾಗ್ತಾಳೆ.


ಜ್ಯೂನಿಯರ್ ಲಿಂಗನ ಕಥೆ::
ರೂಪ ಹಾಗೂ ತದ್ರೂಪದಲ್ಲಿ ಸೀನಿಯರ್ರ್ ಲಿಂಗೇಶ್ವರನನ್ನೇ ಹೋಲುವ, ಆದರೆ ವ್ಯಕ್ತಿತ್ವದಲ್ಲಿ ಆತನಿಗೆ ತದ್ವಿರುದ್ಧವಾದ ವ್ಯಕ್ತಿಯೇ, ಕಳ್ಳತನವನ್ನೇ ಜೀವನದ ದಾರಿ ಮಾಡಿಕೊಂಡವ ಈ ಜ್ಯೂನಿಯರ್ ಲಿಂಗೇಶ್ವರ. ಆತನಿಗೆ ತನ್ನ ತಾತಾ ಸೀನಿಯರ್ರ್ ಲಿಂಗೇಶ್ವರನ ಮ್ಯಾಗೆ ಇನ್ನಿಲ್ಲದ ಕೋಪ. ಜನರಿಗಾಗಿ ಎಲ್ಲವನ್ನೂ ಕೊಟ್ಬಿಟ್ಟು, ನಮ್ಮನ್ನ ಬೀದಿಗ್ ತಳ್ಬುಟ್ಟಾ ತಾತ ಅಂತಾ.


ಆದರೆ, ಕಾಲಕ್ರೆಮೇಣ ರಾಜಕೀಯದ ಕಾಂಟ್ರ್ಯಾಕಿಂಗ್ ಮಾಫಿಯಾದೋರು ಆ ಡ್ಯಾಮ್‍ ಹಳೆದಾಗಿದೆ ಅಂತೇಳಿ, ಹೊಸ ಡ್ಯಾಮ್ ಮಾಡುದ್ರೆ, ಸಾವಿರಾರು ಕೋಟಿಗಳ ಕಮೀಷನ್ ಸಿಗುತ್ತೆ ಅಂತಾ, ಚೆನ್ನಾಗಿರೋ ಡ್ಯಾಮ್ ಅನ್ನು ಅನ್‍ಫಿಟ್ ಅಂತಾ ನಿರೂಪಿಸೋಕ್ಕೇ ನೋಡ್ತಾರೆ. ಆದರೆ, ಅದೇ ಊರಿನ ಒಬ್ಬ ತಾತನಿಗೆ, ಏನೋ ಸಂಶಯ ಬಂದು, ಈ ಊರಿನ ಮುಚ್ಚೋಗಿರೋ ದೇವಸ್ಥಾನವನ್ನ ಮತ್ತೆ ರಾಜಮನೆತನವದಿಂದಲೇ ತೆಗೆದಿಸರೆ, ಎಲ್ಲಾ ಕಷ್ಟಗಳು ಪರಿಹಾರವಾಗುತ್ತೆ ಅಂತೇಳಿದಾಗ, ಜ್ಯೂನಿಯರ್ ಲಿಂಗೇಶ್ವರನನ್ನ ಆ ತಾತನ ಮೊಮ್ಮಗಳು ರಂಗಣ್ಣನ "ಪಬ್ಲಿಕ್ ಟಿವಿ"ಯ  ವರದಿಗಾರ್ತಿ ಎಂಗೋ ಮಾಡಿ ಕರ‍್ಕಂಡ್ ಬರ‍್ತಾಳೇ.


ಬಂದ ಜ್ಯೂನಿಯರ್ ಕುತಂತ್ರಿಗಳ ಯೋಜನೆಯನ್ನ ಮಟ್ಟಹಾಕಿ ಆ ಡ್ಯಾಮ್‍ನ ಸತ್ಯಾಸತ್ಯತೆ, ಮತ್ತು ಅದರ ಪಿಟ್‍ನೆಸ್ ಬಗ್ಗೆ ಮೊದಲೇ ಎಲ್ಲವೂ ಸರಿಯಿದೇ ಅಂತಾ ತಿಳಿ ಹೇಳಿದ್ದ (ಆತ ಎಲ್ಲವೂ ಸರಿ ಇದೆ ಅಂತೇಳಿದ್ದಕ್ಕೆ ಆ ಊರಿನ ರಾಜಕಾರಣಿ ಆತನನ್ನ ಕೊಂದಿರುತ್ತಾನೆ) ವಿಷ್ಯವನ್ನ ದಾಖಲೆ ಸಮೇತ ತಿಳಿಸುವತ್ತಿಗೆ ಸಿನೆಮಾ ಮುಗಿಯೋ ಟೇಮ್ ಆಗುತ್ತೆ.


ಇಷ್ಟ್ ವಯಸ್ಸಾದ್ ಮ್ಯಾಗೂ, ಇನ್ನೂ ಯಂಗ್ ತರ ರಜನಿ ಕಾಣ್ಸೋದು ಸಿನೆಮಾದಲ್ಲಿ ಮಾಮೂಲಿ; ಹಾಗೇ, ಜಾಸ್ತಿ ಮೇಕಪ್ ಮಾಡವ್ರೇ ಅನ್ಸೋದ್ ಕೂಡ ಕೆಲ ಸನ್ನಿವೇಶಗಳಲ್ಲಿ ಕಾಣುತ್ತೆ.


ಒಟ್ನಲ್ಲಿ, ನಮ್ಮ ಕನ್ನಡದ "ಡಕೋಟ ಎಕ್ಸ್’ಪ್ರೆಸ್" ಖ್ಯಾತಿಯ " ರಾಕ್‍ಲೈನ್ ವೆಂಕಟೇಶ್" ಹಾಕಿರೋ ಬಂಡವಾಳ ಬರೋದ್ ಮಾತ್ರ ಗ್ಯಾರೆಂಟಿ, ಆದ್ರೆ ಇದು "ಸೂಪರ್ ಹಿಟ್ಟ್" ಅನ್ನಿಸಿಕೊಳ್ಳದ "ಸೂಪರ್ ಸ್ಟಾರ್" ಸಿನೆಮಾ.


ಒಟ್ಟಾರೆ, ತುಂಬಾ ಎಳ್ದಂಗಿರೋ, ಇದು ರಜನಿ ಸಿನೆಮಾನೇನಾ ಅನ್ನೋವಷ್ಟ್ ಬೋರ್ ಹೊಡೆಸೋ ಸಿನೆಮಾ "ಲಿಂಗ", ಆದರೂ ರಜನಿಯ ಸ್ಟಂಟ್,  ಸ್ಟೈಲ್ ನೋಡಕ್ಕಾದ್ರೂ ಒಂದ್ ಸಲ ಹೋಗ್ ನೋಡಬೋದು, ನಿಮ್ಮತ್ರ ಮೂರ್ ತಾಸ್ ಟೇಮಿದ್ರೆ.

No comments: